ಅನುಪಲಬ್ಧಿ
	
ಪ್ರತ್ಯಕ್ಷಾದಿ ಪ್ರಮಾಣಗಳಲ್ಲಿ ಒಂದು; ಮೀಮಾಂಸ ಮತ್ತು ಅದ್ವೈತವೇದಾಂತಗಳಿಗೆ ವಿಶಿಷ್ಟವಾದದ್ದು. ವಸ್ತುವಿನ ಅಭಾವಜ್ಞಾನಕ್ಕೆ ಅಗತ್ಯವಾದ ಜ್ಞಾನಸಾಧನವೆಂದು ಇವುಗಳ ಮತ. ಮೂಲೆಯಲ್ಲಿ ಕೊಡೆ ಇಲ್ಲ, ಜೇಬಿನಲ್ಲಿ ಕನ್ನಡಕವಿಲ್ಲ ಎಂಬ ಅಭಾವದ (ಇಲ್ಲದಿರುವಿಕೆಯ) ತಿಳಿವು ಹುಟ್ಟುವುದು ಅನುಪಲಬ್ಧಿಪ್ರಮಾಣದಿಂದ. ಮೂಲೆ, ಕೊಡೆ, ಜೇಬು, ಕನ್ನಡಕ ಇವುಗಳ ಇರವು ಇಂದ್ರಿಯಕ್ಕೆ ಗೋಚರವಾದ ವಿಷಯಗಳು. ಇವುಗಳು ಇಲ್ಲದಿರುವುದು ಇಂದ್ರಿಯ ಗೋಚರವಲ್ಲ. ಆದ್ದರಿಂದ ಆ ಅಭಾವದ ಜ್ಞಾನಕ್ಕೆ ಸಾಧನವಾಗಿ, ಇಂದ್ರಿಯ ಪ್ರಮಾಣದಿಂದ ಬೇರೆಯಾದ, ಅನುಪಲಬ್ಧಿ ಎಂಬ ಪ್ರಮಾಣ ಅಗತ್ಯ ಎಂಬುದು ಮೀಮಾಂಸಕರವಾದ.														
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ